ಕ್ಷೀಣತೆ 

ಪ್ರಾಣಿಗಳಲ್ಲಿ ಕೆಲವು ಅವಯವಗಳು ಅಥವಾ ಅಂಗಾಂಗಗಳು ನಶಿಸಿಹೋಗಿರುವ ಸ್ಥಿತಿ (ಡಿಜೆನೆರೇಷನ್). ಇದನ್ನು ಅಕಶೇರುಕ ಹಾಗೂ ಕಶೇರುಕಗಳೆರಡರಲ್ಲೂ ಕಾಣಬಹುದು. ಪ್ರಾಣಿಗಳ ಜೀವನಕ್ರಮವನ್ನು ಅವಲಂಬಿಸಿ ಅನೇಕ ರೀತಿಯ ಕ್ಷೀಣತೆಗಳನ್ನು ಕಾಣಬಹುದು. ಸ್ವತಂತ್ರ್ಯ ಜೀವಿಗಳಲ್ಲಿ ಒಂದು ರೀತಿಯಾದರೆ ಪರಾವಲಂಬಿಗಳಲ್ಲಿ ಮತ್ತೊಂದು ರೀತಿಯ ನಶಿಸುವಿಕೆಯನ್ನು ಕಾಣಬಹುದು. ಕೆಲವು ಪರಾವಲಂಬಿಗಳು ಆತಿಥೇಯ ಪ್ರಾಣಿಗಳಿಗೆ ಎಷ್ಟು ಹೊಂದಿಕೊಂಡಿವೆ ಎಂದರೆ ಅವಿಲ್ಲದೆ ಜೀವಿಸಲಾರವು. ಈ ಹೊಂದಾಣಿಕೆಯಿಂದಾಗಿ ಪರಾವಲಂಬಿಗಳಲ್ಲಿ ಕೆಲವು ವಿಶೇಷ ಮಾರ್ಪಾಡುಗಳು ಕಂಡುಬಂದರೂ ಹಲವು ಅಂಗಾಂಗಗಳು ಕ್ಷೀಣಿಸಿರಬಹುದು ಅಥವಾ ನಶಿಸಿಹೋಗಿರಬಹುದು. ಪರಾವಲಂಬಿಗಳಲ್ಲದ ಪ್ರಾಣಿಗಳಲ್ಲಿ ವಿವಿಧರೀತಿಯ ಕ್ಷೀಣತೆಯನ್ನು ಕಾಣಬಹುದು. ಕ್ಷೀಣತೆ ಯಾವುದೇ ಒಂದು ಅಂಗಕ್ಕೆ ಸೀಮಿತವಾಗಿಲ್ಲ. ಚಲನಾಂಗಗಳ ಕ್ಷೀಣತೆಯನ್ನು ತೆಗೆದುಕೊಂಡರೆ, ಪ್ರೋಟೊಜೋóವ ಗುಂಪಿನಲ್ಲೇ ಅನೇಕ ರೀತಿಯನ್ನು ಕಾಣಬಹುದು. ಮಲೇರಿಯ ರೋಗವನ್ನು ಉಂಟುಮಾಡುವ ಪ್ಲಾಸ್ಮೋಡಿಯಮ್‍ನಲ್ಲಿ ಯಾವ ರೀತಿಯ ಚಲನಾಂಗವೂ ಇಲ್ಲ. ಪರಾವಲಂಬಿಗಳಾದ ಇವುಗಳಲ್ಲಿ ಆತಿಥೇಯ ಪ್ರಾಣಿಯ ರಕ್ತವೇ ಇವನ್ನು ಒಂದು ಕಡೆಯಿಂದ ಇನ್ನೊಂದು ಕಡೆಗೆ ಒಯ್ಯುತ್ತದೆ. ಜಂತುಹುಳುಗಳಲ್ಲೂ ಚಲನಾಂಗಗಳಿಲ್ಲ; ಅಲ್ಲದೆ ಇವುಗಳಲ್ಲಿ ಜ್ಞಾನೇಂದ್ರಿಯಗಳೂ ಬಹುಮಟ್ಟಿಗೆ ಕುಂಠಿತವಾಗಿವೆ. ಲಾಡಿಹುಳುಗಳಲ್ಲಿ ಜನನಾಂಗಗಳನ್ನು ಹೊರತುಪಡಿಸಿ ಮಿಕ್ಕೆಲ್ಲ ಅಂಗಗಳು ಸಂಪೂರ್ಣ ನಾಶವಾಗಿವೆ. ಅನ್ನನಾಳದ ಸುಳಿವೇ ಇಲ್ಲ; ಕಶೇರುಕದ ಕರುಳಿನಲ್ಲಿ ವಾಸಿಸುವ ಇವು ಚರ್ಮದ ಮೂಲಕ ಆಹಾರ ಹೀರಿಕೊಳ್ಳುವುದು.

ಸಂದಿಪದಿ ಕಠಿಣಚರ್ಮಿಗಳಲ್ಲಿ ಲರ್ನಿಯ ಮತ್ತು ಸ್ಯಾಕ್ಯುಲೈನ ಮುಂತಾದುವನ್ನು ಉದಹರಿಸಬಹುದು. ಗಂಡು ಲರ್ನಿಯ ಸ್ವೇಚ್ಛಾಚಾರಿ. ಆದರೆ ಹೆಣ್ಣು ಲರ್ನಿಯ ಮಾತ್ರ ಪ್ರೌಢಾವಸ್ಥೆಯಲ್ಲಿ ಪರಾವಲಂಬಿ. ಡಿಂಬಾವಸ್ಥೆಯಲ್ಲಿ ಇದಕ್ಕೆ ಎಲ್ಲ ಉಪಾಂಗಗಳಿದ್ದರೂ ಬೆಳೆಯುತ್ತ ಪ್ರೌಢಾವಸ್ಥೆಗೆ ಬರುವ ವೇಳೆಗೆ ಹಲವು ಉಪಾಂಗಗಳು ನಶಿಸಿ ಮತ್ತೆ ಕೆಲವು ರೂಪಾಂತರ ಹೊಂದಿ ಮೀನಿನ ದೇಹಕ್ಕೆ ಅಂಟಿಕೊಳ್ಳುವುದಕ್ಕೆ ಅನುಕೂಲವಾಗುವಂತೆ ಮಾರ್ಪಾಡಾಗುತ್ತವೆ. ಏಡಿಯ ಮೇಲೆ ಪರಾವಲಂಬಿಯಾಗಿರುವ ಸ್ಯಾಕ್ಯುಲೈನದಲ್ಲಿ ಡಿಂಬಾವಸ್ಥೆಯ ಅನಂತರ ಪರಾವಲಂಬಿ ಜೀವನ ಆರಂಭವಾಗುತ್ತದೆ. ಇದರ ಡಿಂಬ ಏಡಿಯ ಹೊಟ್ಟೆಗೆ ಅಂಟಿಕೊಂಡು ತನ್ನ ಉಪಾಂಗಗಳನ್ನೂ ಹೊಟ್ಟೆಯ ಭಾಗವನ್ನೂ ಕಳೆದುಕೊಂಡು ದೇಹದ ಮಿಕ್ಕ ಭಾಗದಿಂದ ಏಡಿಯ ಹೊಟ್ಟೆಯ ಮೇಲೆ ಬೆಳೆಯತೊಡಗುತ್ತದೆ. ಕ್ರಮೇಣ ಬೆಳೆದು ಬೂಷ್ಟಿನ ಮುದ್ದೆಯ ಹಾಗೆ ಆಗುತ್ತದೆ. ಸ್ಯಾಕ್ಯುಲೈನದ ದೇಹದ ತಳಭಾಗದಿಂದ ಬೇರುಗಳ ರೂಪದ ರಚನೆಗಳು ಹೊರಟು ಏಡಿಯ ಅಂಗಾಂಗಗಳನ್ನು ಹೊಕ್ಕುತ್ತವೆ, ಇವುಗಳಿಂದ ಸ್ಯಾಕ್ಯುಲೈನ ಆಹಾರ ಪೂರೈಕೆಯಾಗುತ್ತದೆ. 

ಕಶೇರುಕಗಳಲ್ಲಿ ಕಾಣಬರುವ ಕ್ಷೀಣತೆ ಬೇರೆ ರೀತಿಯದು. ಇವುಗಳಲ್ಲಿ ಮಿದುಳು, ಜ್ಞಾನೇಂದ್ರಿಯಗಳು, ಕೈಕಾಲುಗಳು, ಹಲ್ಲುಗಳು ಮುಂತಾದವು ಕ್ಷೀಣವಾಗಿರಬಹುದು. ಆಳವಾದ ಸಮುದ್ರದಲ್ಲಿ ವಾಸಿಸುವ ಕೆಲವು ಮೀನುಗಳಲ್ಲಿ ಇಡೀ ದೇಹವೇ ಕ್ಷೀಣಿಸಿ ದುರ್ಬಲವಾಗಿರುತ್ತದೆ. ಮತ್ತೆ ಕೆಲವಲ್ಲಿ ಕಣ್ಣುಗಳು ವಿಪರೀತ ಚಿಕ್ಕವಾಗಿರಬಹುದು ಇಲ್ಲವೆ ಪೂರ್ಣ ನಾಶವಾಗಿರಬಹುದು. ಜಲಾಂತರ್ಗುಹೆಗಳಲ್ಲಿ ವಾಸಿಸುವ ಕೆಲವು ಮೀನುಗಳು ಅರೆ ಇಲ್ಲವೆ ಪೂರ್ಣ ಕುರುಡಾಗಿರಬಹುದು. ಗ್ರೋನಿಯನ್ ಎಂಬ ಮೀನು ಅರೆಗುರುಡಾದರೆ, ಆಂಬ್ಲಿಯೋಪ್ಸಿಸ್ ಎಂಬುದು ಪೂರ್ಣ ಕುರುಡು. ಕೋಲೋಗ್ಯಾಸ್ಟರ್ ಮೀನಿನಲ್ಲಿ ಕಣ್ಣುಗಳಿದ್ದರೂ ಅವಕ್ಕೆ ದೃಷ್ಟಿ ಸಾಮಥ್ರ್ಯವಿಲ್ಲ. ದ್ವಿಚರಿಗಳಲ್ಲಿ ಯೂರೊಡೀಲ್ ಗುಂಪಿನ ಕೆಲವು ಪ್ರಭೇದಗಳಲ್ಲೂ ಈ ರೀತಿಯ ಕ್ಷೀಣತೆಯನ್ನು ಕಾಣಬಹುದು. ಗುಹೆಗಳಲ್ಲಿ ವಾಸಿಸುವ ಟಿಪ್ಲೊಟ್ರೈಟಾನ್‍ನಲ್ಲಿ ಡಿಂಬಾವಸ್ಥೆಯಲ್ಲಿ ಚೆನ್ನಾಗಿರುವ ಕಣ್ಣುಗಳು ಪ್ರೌಢಾವಸ್ಥೆಗೆ ಬರುವ ವೇಳೆಗೆ ರೆಪ್ಪೆಗಳೆರಡೂ ಕೂಡಿಕೊಂಡು ಕುರುಡಾಗಿಬಿಡುತ್ತವೆ. ಇದರ ಜೊತೆಗೆ ಕಣ್ಣಿನ ಒಳರಚನೆಯೂ ಮಾರ್ಪಡುತ್ತದೆ. ಟಿಪ್ಲೊಮೋಲ್ಗೆಯ ಡಿಂಬಾವಸ್ಥೆಯಲ್ಲೇ ದುರ್ಬಲ ಕಣ್ಣುಗಳಿವೆ. ಇದರಲ್ಲಿ ಕಣ್ಣಿನ ಮಾಂಸಖಂಡಗಳೇ ಇಲ್ಲ. ಇದರಿಂದಾಗಿ ಕಣ್ಣು ಚರ್ಮದಿಂದ ಯಾವಾಗಲೂ ಮುಚ್ಚಿಕೊಂಡಿರುತ್ತವೆ. ಗುಹೆಗಳಲ್ಲಿ ವಾಸಿಸುವ ಪ್ರೋಟಿಯಸ್ ಎಂಬ ದ್ವಿಚರಿಯಲ್ಲಿ ಸಹ ಕಣ್ಣಿನ ಕ್ಷೀಣತೆಯನ್ನು ಗಮನಿಸಬಹುದು. ಬೆಳಕಿಲ್ಲದ ಸ್ಥಳಗಳಲ್ಲೇ ಇದು ವಾಸಿಸುವುದರಿಂದ ಇದರ ಕಣ್ಣುಗಳು ಕ್ರಮೇಣ ಕ್ಷೀಣಿಸಿವೆ ಎಂದು ವಿಕಾಸವಾದಿಗಳು ಅಭಿಪ್ರಾಯಪಡುತ್ತಾರೆ.
ಸ್ತನಿಗಳಲ್ಲೂ ಅನೇಕ ರೀತಿಯ ಕ್ಷೀಣತೆಗಳಿವೆ. ಸಾಧಾರಣವಾಗಿ ಎಲ್ಲ ಸ್ತನಿಗಳಲ್ಲೂ ಹಲ್ಲುಗಳಿವೆ. ಆದರೆ ಇರುವೆಯನ್ನು ತಿನ್ನುವ ಸ್ತನಿಗಳಲ್ಲಿ ಹಲ್ಲುಗಳು ದುರ್ಬಲವಾಗಿವೆ ಅಥವಾ ಸಂಪೂರ್ಣ ನಾಶಗೊಂಡಿವೆ. ತಿಮಿಂಗಿಲಗಳಲ್ಲಿಯೂ ಹಲ್ಲುಗಳ ದುರ್ಬಲತೆಯಿದೆ. ಒಂದು ಬಗೆಯ ತಿಮಿಂಗಿಲಗಳಲ್ಲಿ ಹಲ್ಲುಗಳಿದ್ದರೂ ಅವುಗಳ ರಚನೆಯ ಮಾದರಿ ಸ್ತನಿಯಲ್ಲಿದ್ದ ಹಾಗಿಲ್ಲ. ಇನ್ನೊಂದು ಗುಂಪಿನ ತಿಮಿಂಗಲಗಳಲ್ಲಿ ಹಲ್ಲುಗಳೇ ಇಲ್ಲ. ಬದಲಾಗಿ ಬೇರೆ ರೀತಿಯ ರಚನೆಗಳಿವೆ. ಆದ್ದರಿಂದ ಈ ಗುಂಪಿನ ತಿಮಿಂಗಿಲಗಳು ಮೀನು ಮುಂತಾದ ಪ್ರಾಣಿಗಳನ್ನು ತಿನ್ನಲಾರವು. ಕೂದಲಿನಲ್ಲೂ ಕ್ಷೀಣತೆಯನ್ನು ಕಾಣಬಹುದು. ಸ್ತನಿಗಳ ದೇಹ ಕೂದಲಿನಿಂದ ಕೂಡಿದೆ. ಇದು ಸ್ತನಿಗಳ ಮುಖ್ಯ ಲಕ್ಷಣಗಳಲ್ಲೊಂದು. ಆದರೆ ತಿಮಿಂಗಿಲಗಳಲ್ಲಿ ಕೆಳತುಟಿಯ ಮೇಲೆ ಬಿಟ್ಟು ದೇಹದ ಉಳಿದ ಭಾಗಗಳಲ್ಲೆಲ್ಲೂ ಕೂದಲುಗಳಿಲ್ಲ.
(ಎನ್.ವಿ.ಎ.)